ಆಯಾಸ	ಎಂದರೆ, ಒಂದೇ ಸಮನಾದ ಮೈ ದುಡಿಮೆ ಇಲ್ಲವೇ ಮನಸ್ಸಿನ ಚಟುವಟಿಕೆಯಿಂದ ಕುಂದೆನಿಸಿ, ಸಾಮಾನ್ಯವಾಗಿ ವಿಶ್ರಾಂತಿಯಿಂದಲೋ ಕೆಲಸದ ಬದಲಾವಣೆಯಿಂದಲೋ ಹೋಗಲಾಡಿಸುವ ಸ್ಥಿತಿ, ಕೆಲವೇಳೆ ಕೆಲಸದಲ್ಲಿ ದುಡಿದ ಮೇಲೆ ಆಗುವ ಸುಸ್ತು ಆಗ ಮನಸ್ಸಿಗೆ ಎನಿಸುವ ದಣಿವು, ಬೇಜಾರು ಇವಕ್ಕೂ, ಬಿಡುವಿಲ್ಲದೆ ಏನಾದರೂ ಮಾಡುತ್ತಿರುವಾಗ ಕೆಲಸ ಕೆಡುತ್ತ ಬರುವುದಕ್ಕೂ ಆಯಾಸ (ಫೆಟೇಗ್) ಎನ್ನುವುದೂ ಉಂಟು. ದಣಿವು ಎಲ್ಲರೂ ಅನುಭವಿಸುವುದೇ ಆದರೂ ಮಿತಿಮೀರಿದಾಗ ಇಲ್ಲವೇ ಸುಲಭವಾಗಿ ತಲೆದೋರಿದಾಗ ಮಾತ್ರ ಇದು ಬೇನೆಯ ಸೂಚಕ. ಆಯಾಸ ಬಹಳವಾದರೆ, ಮೈ ಅಂಗಗಳಲ್ಲಿ ಶಾಶ್ವತ ಬದಲಾವಣೆಗಳು ಆಗಬಹುದು. ಇಲ್ಲವೇ ಮತಿಕೆಡಬಹುದು. ಇತ್ತೀಚಿನ ಯುದ್ಧಕಾಲಗಳಲ್ಲಿ. ಆಯಾಸ ಎನ್ನುವುದಕ್ಕೆ ಇನ್ನೂ ಹೆಚ್ಚಿನ ಅರ್ಥಗಳು ಬಂದಿವೆ. ಆಯಾಸ ಬರೀ ಕೆಲಸ, ಚಟುವಟಿಕೆಗಳಿಂದಲೇ ಆಗಬೇಕಿಲ್ಲ. ನಿದ್ದೆಗೇಡು, ಅಂಜಿಕೆ, ಪುಕ್ಕಲುತನ, ಚಿಂತೆಯ ಒತ್ತಡ, ಬಲು ಚಳಿ ಇಲ್ಲವೇ ಬಲು ಬಿಸಿಲಿಗೆ ಒಡ್ಡುವಿಕೆ, ಸುಮ್ಮನೆ ಕೆಲಸವಿಲ್ಲದೆ, ಬೇಸರಿಕೆ, ಮನಸ್ಸಿಗೆ ಬೇರೆ ಕೆಲಸವಿಲ್ಲದೆ ಬರಿದೇ ಕಾಯುತ್ತ ಕುಳಿತಿರುವುದು, ಇವೆಲ್ಲವುಗಳಿಂದಲೂ ಆಯಾಸವಾಗಬಹುದು. ಕೈಗಾರಿಕೆಗಳಲ್ಲಿ ಇನ್ನೂ ಹಲತೆರನ ಕಾರಣಗಳೂ ಇವೆ.

ಚಿತ್ರ-1 

	ಪುಷ್ಟಿಸಾಲದೆ ಸ್ನಾಯು ದಣಿದರೂ, ಬಹಳ ಹೊತ್ತು ದುಡಿದುದರಿಂದ ಅವರಲ್ಲಿ ಮುಖ್ಯವಾಗಿ ಇಂಗಾಲದ ಡಯಾಕ್ಸೈಡು, ಹಾಲಿನಾಮ್ಲದ (ಲ್ಯಾಕ್ಟಿಕ್ ಆಸಿಡ್) ತೆರನ ಕಸರಿನ ಪದಾರ್ಥಗಳೂ ಹೆಚ್ಚು ಕೂಡುವುದೇ ಕಾರಣ. ಸ್ನಾಯುಗಳ ಮಿತಿಯನ್ನು ದಣಿವು ತೋರಿಸಿ, ಇನ್ನಷ್ಟು ಕೆಡದಂತಿರಿಸಲು ವಿಶ್ರಾಂತಿ ಬಯಕೆ ಸೂಚಿಸುತ್ತದೆ. ಆಯಾಸವನ್ನು ಲೆಕ್ಕಿಸದವರಿಗೆ ಹೀಗೆ ಕಸರಿನ ಪದಾರ್ಥಗಳನ್ನು ಕೂಡಿಹಾಕಿಕೊಳ್ಳುವ ಮಿತಿ ದೊಡ್ಡದಾಗಿರುವುದು, ಇಲ್ಲವೇ ಇನ್ನೂ ನಿಧಾನ ಆಗಬಹುದು.

	ಅಳತೆ: ಅಂಗಕೆಲಸದಿಂದಲೋ ಕಣ್ಣರಿಕೆಯಿಂದಲೋ ಅನುಭವದಿಂದಲೋ ಆಯಾಸವನ್ನು ಗಮನಿಸಿ ಅಳೆಯಬಹುದು.

	ಅನುಭವದಿಂದ ಅಳೆವ ಬಗೆ ತೀರ ಸಾಮಾನ್ಯವಾದುದು. ಆದರೆ, ದಣಿತ, ತೊಂದರೆ, ನೋವು, ನಿತ್ರಾಣಗಳನ್ನು ಅನುಭವಿಸುವಂತಿಲ್ಲ, ಅಳೆಯುವಂತಿಲ್ಲ, ತೋರಿ ಗುರುತಿಸುವಂತಿಲ್ಲ. ಮನಸ್ಸಿಗೆ ದಣಿವೆನಿಸಿದರೆ ಅಂಗಗಳಲ್ಲೂ ದಣಿವು ಕಾಣಬಹುದು. ಮನಸ್ಸಿನ ನಿತ್ರಾಣ ಸಹಜವಾಗಿ ಹಗಲಿನ ಕೊನೆಯಲ್ಲಿ ನಿದ್ದೆ ಬರಿಸಿ ಬೆಳಗಿನ ಹೊತ್ತಿಗೆ ಚೇತರಿಸಿಕೊಳ್ಳುವಂತೆ ಮಾಡುವುದು. ಮನಸ್ಸಿಗೆ ಆಯಾಸ ಆಗಿರುವವನೇ ಆಗಿಂದಾಗ್ಗೆ ಎಷ್ಟು ನಿತ್ರಾಣ ಎನ್ನಿಸುತ್ತಿದೆಯೆಂದು ಗುರುತಿಸುತ್ತಾ ಇರುವುದು ಈ ತೆರನ ಒಂದು ಉಪಾಯವಿದೆ. ಇವನ್ನೂ ಗೆರೆ ಚಿತ್ರದಲ್ಲಿ ಗುರುತಿಸಿ, ಕೆಲಸದ ದುಡಿತದಲ್ಲಿನದರೊಂದಿಗೆ ಹೋಲಿಸಿದರೆ, ಬಹು ಮಟ್ಟಿಗೆ ಎರಡಕ್ಕೂ ಚೆನ್ನಾಗಿ ಹೊಂದಾಣಿಕೆ ಕಾಣುವುದು. ಮೈ ನಿತ್ರಾಣ ತೋರುವ ಎಷ್ಟೊ ಮುಂಚೆ ಮನದ ದಣಿವು ಗೊತ್ತಾಗುತ್ತದೆ. 

	ಸುಸ್ತು: ಆರೋಗ್ಯ ಕೆಟ್ಟಿರುವಾಗಲೋ ರೋಗದ ಮುನ್ಸೂಚನೆಯಾಗೋ ಆಯಾಸ ಎಡೆಬಿಡದೆ ಇದ್ದೇ ಇರಬಹುದು. ಇದೇ ಸುಸ್ತು, ಹಲವಾರು ಕಾರಣಗಳಿಂದ ಸ್ನಾಯುಗಳ, ಮನಸ್ಸಿನ ಬಲ ಕುಂದಿ, ಮುಂದೆ ಏನೇನೂ ಕೆಲಸವಾಗದಷ್ಟು ನಿತ್ರಾಣವಾಗುವುದು. ನರಗಳ ಸ್ನಾಯುಗಳ ಚಟುವಟಿಕೆಯಿಂದ ಮೈಯಲ್ಲಿ ವಿಷಪದಾರ್ಥಗಳು ಕೂಡಿಕೊಳ್ಳುತ್ತವೆ. ಎಂದಿನ ಕೆಲಸಕ್ಕೂ ಆತಂಕವಾಗುವುದು. ಸುಸ್ತಿನಲ್ಲಿ ಮನಸ್ಸಿನ, ಮೈಯನಿತ್ರಾಣ ಮಿತಿಮೀರಿ, ಯಾವುದರಲ್ಲೂ ಆಸಕ್ತಿಯಿರದೆ, ತಲೆನೋವು, ಕೆರಳು, ಮನಗುಂದುವೆ, ಮರೆವು, ಯಾವುದರಲ್ಲೂ ಮನಸ್ಸಿಡಲು ಕಷ್ಟ, ಅಲಸಿಕೆ, ಕೊನೆಯದಾಗಿ ತಬ್ಬಿಬ್ಬೂ ಆಗಿ ಕೆಲವೇಳೆ ಭ್ರಮೆಯಿಂದ ಹುಚ್ಚುಚ್ಚಾಗಿ ತೋರಬಹುದು. ಮೈಯಲ್ಲಿನ ಸ್ನಾಯುಗಳು ಸಣ್ಣಗಾಗಿ ಬಲಗುಂದಿ, ಅಜೀರ್ಣ, ಮಲಗಟ್ಟು, ನರಗಳ ಹಿಮ್ಮರಿಗೆಗಳು (ರಿಫ್ಲೆಕ್ಸಸ್) ಅತಿಯಾಗಬಹುದು. ಬಲು ಕೆಲಸ ಮಾಡುವ ಯಾವುದಾದರೂ ಕೆಲವು ಸ್ನಾಯುಗಳೂ ಸುಸ್ತಾಗಬಹುದು.

	ಮೈಯಲ್ಲಿನ ಅಂಗಗಳ ಕೆಲಸಗಳನ್ನು ಅಳೆವುದರಿಂದಲೂ ಆಯಾಸದ ಮಟ್ಟವನ್ನು ತಿಳಿಯಬಹುದು. ಮುಖ್ಯವಾಗಿ ಮೈಯಲ್ಲಿನ ಶಕ್ತಿಗಳ ಕೊಳ್‍ಕೊಡುಗೆಗಳ ವೇಗದಿಂದ ಅಳೆಯಬಹುದು. ಜೀವವಸ್ತುಕರಣದ ವೇಗದಿಂದ(ಮೆಟಿಬಾಲಿಕ್ ರೇಟ್) ಇದು ಚೆನ್ನಾಗಿ ಗೊತ್ತಾಗುವುದು. ಸಾಮಾನ್ಯವಾಗಿ ನಾಡಿ, ರಕ್ತದ ಒತ್ತಡ, ಮೈಕಾವು, ಉಸಿರಾಟಗಳನ್ನೂ ಗುರುತಿಸಿದರೆ ತಿಳಿಯುತ್ತದೆ. ಜೀವವಸ್ತುಕರಣದಿಂದ ಮೈಯಲ್ಲಿ ಹುಟ್ಟಿಕೊಂಡ, ಅಂದರೆ ಪುಪ್ಪುಸಗಳಿಂದ ಹೊರಬಿದ್ದ ಇಂಗಾಲದ ಡಯಾಕ್ಸೈಡಿಗೂ ಒಳಗೆ ಸೇರಿಕೊಂಡ ಆಮ್ಲಜನಕಕ್ಕೂ ಇರುವ ಪರಿಮಾಣದ ಲೆಕ್ಕದಿಂದಲೂ ತಿಳಿಯಬಹುದು. ಇದನ್ನೇ ಅಡ್ರಿನಲ್‍ರಗಟೆಯಿಂದ (ಕಾರ್ಟೆಕ್ಸ್) ರಕ್ತದಲ್ಲಿ ಸೇರಿದ 17- ಕೀಟೊಸ್ಟಿರಾಯ್ಡಗಳ ತೆರನ ಗ್ರಂಥಿಗಳ ಸುರಿಕೆಗಳನ್ನೋ ರಕ್ತದಲ್ಲಿ ಹೆಚ್ಚಿಕೊಳ್ಳುವ ಹಾಲಿನಾಮ್ಲ, ರಂಜಕ, ಕೊಲೆಸ್ಟಿರಾಲ್, ಕ್ರಿಯಾಟಿಸೀನುಗಳ ಪ್ರಮಾಣಗಳಿಂದ ಕೂಡ ಕಂಡುಕೊಳ್ಳಬಹುದು.

	ಸ್ನಾಯುಗಳ ದುಡಿತ ಜೋರಾಗಿದ್ದಾಗ ಇವುಗಳ ಲೆಕ್ಕ ಖಚಿತ. ಆದರೆ ಕೇವಲ ಕೂತಲ್ಲೇ ಕೂತಿದ್ದರೆ, ಬರಿಯ ಚಿಂತೆಗಳಲ್ಲಿ ಮುಳುಗಿದ್ದರೆ ಆಗುವ ವ್ಯತ್ಯಾಸಗಳು ತೀರ ಸ್ವಲ್ಪ. ಅಳತೆಗೂ ಸಿಗವು, ಆ ಹೊತ್ತಿನಲ್ಲಿ ಸ್ನಾಯುಗೆಲಸಗಳೇ ಕಾರಣವಾಗಿರಬಹುದು. ಚಿಂತೆಯೊಂದಿಗೇ ಬರುವ ಸ್ನಾಯುಗೆಲಸಗಳೇ ಕಾರಣವಾಗಿರಬಹುದು. ಚಿಂತೆಯೊಂದಿಗೆ ಯಾವಾಗಲೂ ನಿಲುವಿನ ದೊಡ್ಡ ಸ್ನಾಯಗಳಲ್ಲಿ ಕೂಡ ಸೆಳೆತಗಳು ಸೇರುತ್ತಿರುವುವು. ಮನದ ಉದ್ರೇಕದ ಒತ್ತಡವಿದ್ದೇ ಇರುವುದು. ಇದಕ್ಕಾಗಿ ತನ್ನಿಯಮಿಕ ನರದ ಮಂಡಲದ (ಆಟೊನಾಮಿಕ್ ನರ್ವಸ್ ಸಿಸ್ಟಂ) ಅಂಕೆಯಲ್ಲಿರುವ ಗ್ರಂಥಿಗಳು ನಯ ಸ್ನಾಯುಗಳು ಹೆಚ್ಚಿನ ಶಕ್ತಿಯನ್ನು ಬಳಸುತ್ತವೆ. ಸ್ನಾಯುವಿನಲ್ಲಿನ ಬಿಗಿತಗಳನ್ನು, ಅದರಲ್ಲಿ ಹರಿದ ವಿದ್ಯುತ್ತನ್ನು ಹರಿಬಿಟ್ಟು, ಚರ್ಮದಲ್ಲಿ ಹರಿವ ವೇಗದ ಬದಲಾವಣೆಗಳಿಂದಲೂ ಮನಸ್ಸಿನ ಉದ್ವೇಗವನ್ನು ಗುರುತಿಸಬಹುದು.

	ಕಣ್ಣರಿಕೆಗಳಿಂದ ಆಯಾಸವನ್ನು ಎರಡು ರೀತಿಗಳಲ್ಲಿ ಪರೀಕ್ಷಿಸಬಹುದು. ಒಂದೇ ಸಮನೆ ಕೆಲಸ ಮಾಡುತ್ತಿರುವವರ ಸಾಧನೆಯನ್ನು ಆಗಾಗ್ಗೆ ಗುರುತಿಸಿಟ್ಟುಕೊಂಡು ಅಳೆಯಬಹುದು. ಆಗಿಂದಾಗ್ಗೆ ಮಾಡುವ ಕೆಲಸ ಬಿಟ್ಟು ಇನ್ನೇನಾದರೂ ಬೇರೆ ಕೆಲಸಕೊಟ್ಟು ಒಬ್ಬನಿಂದಾಗುವ ಕೆಲಸವನ್ನು ಅಳೆಯಬಹುದು. ಅನೇಕ ಸಂಶೋಧಕರು ಚುರುಕಾಗಿ ಮಿನುಗು ಕೂಡುವ ವೇಗವನ್ನು ಇದಕ್ಕಾಗಿ ಬಳಸುತ್ತಿರುವರು. ಕಪ್ಪು, ಬಿಳಿಯ ಪಟ್ಟೆಗಳನ್ನು ಸುತ್ತಲೂ ಬಳಿದಿರುವ ಒಂದು ಗುಂಡು ತಟ್ಟೆಯನ್ನು ತಿರುಗಿಸುತ್ತ ನೋಡುವವನಿಗೆ ಇದು ನಸು ಬೂದುಬಣ್ಣವಾಗಿ ತೋರುವಾಗಿನ ವೇಗವನ್ನು ಗುರುತಿಸುವರು. ಆಯಾಸ ಆಗಿರುವಾಗ ಇದರ ವೇಗ ಇಳಿದಿರುವುದು.

	ಮೈಯಲ್ಲಿ ಯಾವುದಾದರೂ ಒಂದೆಡೆಯಲ್ಲಿ ಆಗಿರುವ ಸ್ನಾಯುವಿನ ನಿತ್ರಾಣವನ್ನು ಅಳೆಯುವ ಒಂದು ಸಾಧನವಿದೆ. ಬೆರಳಿನ ಕೆಲಸ ಚಿತ್ರಕದಲ್ಲಿ (ಎರ್ಗೊಗ್ರಾಫ್) ಒಂದೆಡೆಯಲ್ಲಿರುವ ಬೆರಳಿಗೆ ದಾರಕಟ್ಟಿ ಗೊತ್ತಾದ ತೂಕ ತೂಗು ಕಟ್ಟಿರುತ್ತದೆ. ಒಂದೇ ಸಮನಾಗಿ ಇದನ್ನು ನಡು ಬೆರಳಿಂದ ಎಳೆಯುತ್ತಿರಬೇಕು. ತಿರುಗುತ್ತಿರುವ ಉರುಳೆಯ ಮೇಲೆ ಹಾಗೆ ಎಳೆದ ದೂರವನ್ನು ಸೂಜಿಯೊಂದು ಗೀಚಿ ಗುರುತಿಸುತ್ತಿರುವುದು. ಇದರಿಂದ ಬಂದ ಕೆಲಸಚಿತ್ರ (ಎರ್ಗೊಗ್ರಾಂ) ಬಲು ದುಡಿದ ಹೊತ್ತು, ನಿಧಾನವಾಗಿ ಬೀಳಾಗುವುದು, ಕೊನೆಗೆ ಸುಸ್ತಾಗಿ ಎಳೆಯದಾಗುವುದನ್ನೂ ಸೂಚಿಸುತ್ತದೆ. ತೂಗು ಹಾಕಿದ ತೂಕಕ್ಕೆ ತಕ್ಕಂತೆ ಕೆಲವೇ ನಿಮಿಷಗಳಲ್ಲಿ ಆಯಾಸ ತಲೆದೋರುವುದು.

	ಮನಸ್ಸಿನ ಕೆಲಸಗಳಲ್ಲೂ ಇದೇ ಇಳಿವು ಕಂಡರೂ ಪೂರ್ತಿ ಸುಸ್ತು ಅಪರೂಪ. ಕೆಲವೇಳೆ ತಂತಾನಾಗಿ ಕೆಲಸ ಸಾಗುತ್ತಲೇ ಹೋಗುತ್ತಿರುವ ಮಟ್ಟಕ್ಕೆ ಬಂದು ನಿಂತುಬಿಡಬಹುದು. ಬುದ್ಧಿಗೆಲಸಗಳಿಗೆ ಆಗಾಗ್ಗೆ ತಮ್ಮ ಚಿತ್ತಕ್ಕೆ ತಡೆಯಾಗುವುದು ಅವರಿಗೇ ಗೊತ್ತಿರದು. ನರದ ಮಂಡಲ ತಂತಾನು ಪಾಲಿಸಿಕೊಳ್ಳುವ ಉಪಾಯವಿದು. ಬಿಡುವಿಲ್ಲದೆ ಬೇಜಾರಿನ ಕೆಲಸವನ್ನು ಮಾಡಿದ್ದೇ ಮಾಡುವುದು, ಬಹುಮಟ್ಟಿಗೆ ಮನಸ್ಸಿನ ಆಯಾಸಕ್ಕೆ ಮುಖ್ಯ ಕಾರಣ. ಕೆಲವರು ಇದನ್ನೇ ಆಯಾಸ ಎನ್ನದೆ, ಬೇಜಾರು, ನಿರಾಸಕ್ತಿ ಎನ್ನುವರು.

	ಕೈಗಾರಿಕೆಯಲ್ಲಿ ಆಯಾಸ : ಕೈಗಾರಿಕೆಯ ಕಾರ್ಖಾನೆಗಳಲ್ಲಿ ಉತ್ಪತ್ತಿಯನ್ನು ಏರುಪೇರು ಮಾಡುವುದರಲ್ಲಿ ಆಯಾಸದ ಪಾತ್ರ ಹಿರಿದು. ಆಯಾಸವೆಂದರೆ ಏನೆಂದು ಖಚಿತವಾಗಿ ಯಾರೂ ಹೇಳದಿದ್ದರೂ, ಎಲ್ಲ ತೆರನ ಆಯಾಸ ಇರುವುದನ್ನೂ ಅದರ ಹರಿವನ್ನೂ ಅಳೆವ ಖಚಿತ ಪರೀಕ್ಷೆ ಇಲ್ಲವಾದರೂ ಕೈಗಾರಿಕೆಗಳ ಉತ್ಪತ್ತಿಗೆ ಅಡ್ಡಿಯಾಗುವ ಮುಖ್ಯ ಕಾರಕಗಳಲ್ಲಿ ಇದೂ ಒಂದು. ಎಂದೆಂದಿಗೂ ತಲೆಹಾಕುವ ತೊಡರು, ಆಯಾಸ ಕೆಲಸಗಾರನಿಗೆ ಗೊತ್ತಾಗುವ ಮೊದಲೇ ಅವನನ್ನು ಮುತ್ತಿ ನಿತ್ರಾಣಗೊಳಿಸುತ್ತದೆ. ಇಲ್ಲಿ ಎಲ್ಲರಿಗೂ ಗೊತ್ತಿರುವ ನಿಜವಾದ ದಣಿವು, ಸುಸ್ತುಗಳಲ್ಲ. ಈ ಅನುಭವಗಳು ಅವನಿಗೆ ಬರುತ್ತಲೇ ಇರುವುವು. ದಣಿವು ಗೊತ್ತಾಗುವ ಮೊದಲೇ ಈ ಆಯಾಸ ತಲೆ ಹಾಕಿರುವುದು. ಹೀಗೆ ಯಾವುದಾದರೂ ಉತ್ಸಾಹಕರ ಚಟುವಟಿಕೆಯಲ್ಲಿ ನಿರತನಾಗಿರುವ ಒಬ್ಬನ ಆಯಾಸ ಅವನಿಗೆ ಗೊತ್ತಾಗದೆಯೇ ಆವರಿಸಿ ಅವನು ಮಾಡುವ ಕೆಲಸದಲ್ಲಿ ತಪ್ಪುಗಳಾಗಬಹುದು, ಚೆನ್ನಾಗದಿರಬಹುದು, ಕೊನೆಗೆ ಕೆಡಬಹುದು.

	ಆಯಾಸ ಅವರಿಸಿದಾಗ ಕೆಲಸಗಾರನ ಉತ್ಪತ್ತಿ ಕುಗ್ಗುತ್ತ ಹೋಗುವುದು. ಆದ್ದರಿಂದ, ಆಯಾಸ ಹೆಚ್ಚಿಸುವ ಯಾವ ಕಾರಣವೇ ಆಗಲಿ, ಕೈಗಾರಿಕೆಯಲ್ಲಿನ ಉತ್ಪತ್ತಿಯನ್ನೂ ಇಳಿಸುತ್ತದೆ. ಆದರೆ ಆಯಾಸವನ್ನು ಮುಂದೂಡುವುದಾದರೆ ಉತ್ಪತ್ತಿ ಏರುವುದು. ಮೊದಲನೆಯ ಮಹಾಯುದ್ಧದಿಂದೀಚೆಗೆ ಕೈಗಾರಿಕಾ ವೈದ್ಯರಲ್ಲಿ ಹಲವಾರು ಸಂಶೋಧನೆಗಳಾಗಿವೆ. ಕೆಲಸಗಾರನ ದುಡಿಮೆಯ ಬಲವನ್ನು ಖಚಿತವಾಗಿ ಕಂಡುಹಿಡಿಯುವ ಯತ್ನಗಳಾಗಿವೆ. ಉತ್ಪತ್ತಿಯನ್ನು ಹೆಚ್ಚಿಸುವುದೇ ಮುಖ್ಯ ಗುರಿಯಾದರೂ ಕೆಲಸಗಾರನ ಆರೋಗ್ಯ ಸುಪಾಲನೆಗಳ ಕಡೆ ಗಮನ ಹರಿಸುವುದಿಲ್ಲ. ಆಯಾಸವನ್ನು ಕಳೆವ, ಮನೋದೃಢತೆ ಹೆಚ್ಚಿಸುವ ಕ್ರಮಗಳು ಹೆಚ್ಚಾಗಿ ಜಾರಿಯಲ್ಲಿವೆ.

	ಇದಕ್ಕೆ ಒಂದು ಉದಾಹರಣೆ ಇದೆ. ಒಂದು ಕಾರ್ಖಾನೆಯಲ್ಲಿ ಇನ್ನೊಂದು ಹೊಸ ಭಾಗವನ್ನು ಕಟ್ಟಿ, ವಾರಕ್ಕೆ 5,000 ಹೆಚ್ಚಿಗೆ ಸಾಮಾನುಗಳನ್ನು ತಯಾರಿಸಲು ಯೋಜಿಸಿದರು. ಹೊಸಬರನ್ನು ಕೆಲಸಕ್ಕೆ ನೇಮಿಸಿಕೊಂಡರು. ಆ ಕೆಲಸದಲ್ಲಿ ಇವರಾರಿಗೂ ಏನೇನೂ ಅನುಭವ ಇರಲಿಲ್ಲ. ಆದರೂ 6 ತಿಂಗಳು ಕಳೆದ ಮೇಲೆ ಎಲ್ಲರಿಗೂ ಸೋಜಿಗವಾಗುವಂತೆ, ಹಳಬರು ವಾರಕ್ಕೆ 5,000 ಸಾಮಾನುಗಳನ್ನು ತಯಾರಿಸುತ್ತಿದ್ದರೆ, ಹೊಸಬರು ವಾರಕ್ಕೆ 13,000 ಸಾಮಾನುಗಳನ್ನು ತಯಾರಿಸಿದ್ದರು. ಹಳಬರಿಗಿದ್ದ ಯಂತ್ರ ಸೌಕರ್ಯಗಳು, ಅನುಕೂಲಗಳೇ ಹೊಸಬರಿಗೂ ದೊರೆತಿದ್ದುವು, ಇದನ್ನು ಬಿಡಿಸಿ ನೋಡಿದ ಪರಿಣತರು ಹೇಳಿದಂತೆ, ಹಳಬರಿಗೆ ಹಲವಾರು ಕ್ರಮಗಳು, ನಡವಳಿಕೆಗಳು, ಅಭ್ಯಾಸಗಳು ಎಷ್ಟೋ ಕಾಲದಿಂದಲೂ ಮಾಮೂಲು ಆಗಿಬಿಟ್ಟಿದ್ದುವು. ಈ ಕಟ್ಟುಗಳು ಹೊಸಬರನ್ನು ಬಿಗಿದಿರಲಿಲ್ಲ. ಈ ಕಾರಣಗಳಿಂದ ಹಳಬರಲ್ಲಿ ಆಯಾಸ ಬೇಗನೆ ಬರುತ್ತಿತ್ತು. ಹೀಗೇ ಕೆಲಸದ ವೇಳೆಯೂ ದುಡಿವ ಕ್ರಮಗಳೂ, ಆಯಾಸಕ್ಕೆ ಕಾರಣ ಆಗಬಹುದು.

	ಕೆಲಸದ ವೇಳೆ : ಇದು ಬಲು ಮುಖ್ಯ. ಹೆಚ್ಚು ಹೊತ್ತು ಕೆಲಸ ಮಾಡಿದಷ್ಟೂ ಹೆಚ್ಚು ಉತ್ಪತ್ತಿ ಆಗುವುದೆಂದು ತೋರುವುದಾದರೂ ನಿಜವಾಗಿ ಆಯಾಸ ಬೇಗನೆ ಆವರಿಸಿ ಅವನ ದುಡಿಮೆ ಕುಗ್ಗುತ್ತ ಹೋಗುವುದು. ಯಾವ ಕೆಲಸದಲ್ಲೇ ಇರಲಿ, ಅದರಿಂದ ಚೇತರಿಸಿಕೊಳ್ಳಲೂ ಒಂದು ಗೊತ್ತಾದ ಅವಧಿ ಬೇಕೇ ಬೇಕು. ಚೇತರಿಸಿಕೊಳ್ಳಲು ಬಿಡುವನ್ನು ಮೊಟಕು ಮಾಡಿದ ಹಾಗೆಲ್ಲ ಕೆಲಸವೂ ಕೆಡುತ್ತ ಹೋಗುವುದು.

	ಕೆಲಸಗಳನ್ನು ಅಂಕೆಗೊಳಿಸುವ ಕೇಂದ್ರದ ನರದ ಮಂಡಲದಲ್ಲಿನ ನರಕಣಗಳೂ ಬಹುಮಟ್ಟಿಗೆ ಆಯಾಸಕ್ಕೆ ಈಡಾಗುತ್ತವೆ. ಇದರಿಂದಲೇ ಕೆಲಸಗಾರರು ತಮ್ಮ ಕೆಲಸದ ರೀತಿಯನ್ನು ಬದಲಾಯಿಸಿದರೆ, ಮೆದುಳಲ್ಲಿ ನರಕಣಗಳ ಹೊಸ ತಂಡವೇ ಕೆಲಸಕ್ಕಿಳಿಯುವುದರಿಂದ ಆಯಾಸ ಬೇಗನೆ ಬಾರದು. ಒಂದೊಂದು ನರಕಣಕ್ಕೂ ಅದರದೇ ಕೆಲಸಗೈವ, ವಿರಮಿಸುವ, ತಾಳಗತಿ ಇರುವುದು. ಇದಕ್ಕೆ ಸರಿಯಾಗಿ ಕೆಲಸಗಳ ವೇಳೆ, ಯಂತ್ರಗಳ ಚಲನೆಗಳೂ ಇದ್ದಲ್ಲಿ ಕೆಲಸವೂ ಹಸನಾಗಿರುವುದು. ಇದಕ್ಕೂ ಹೆಚ್ಚಿನ ಅವಸರವಾದರೆ ಆಯಾಸ ತಲೆದೋರುವುದು. ಆಯಾಸಗೊಳಿಸುವ ಕೆಟ್ಟಕಾರಕಗಳನ್ನು ದೂರವಿರಿಸಿ, ಕೆಲಸಗಾರರು ಚೆನ್ನಾಗಿ ಕೆಲಸಮಾಡಿ ಹೆಚ್ಚು ಉತ್ಪತ್ತಿ ಕೈಗೆ ಬರುವ ಉಪಾಯಗಳನ್ನು ಕಂಡುಕೊಳ್ಳಬೇಕು.

	ಇಂಗ್ಲೆಂಡಿನಲ್ಲಿ, ಕಳೆದ ಮಹಾಯುದ್ಧದ ಕಾಲದಲ್ಲಿ ದಿನವೂ ಅಲ್ಲದೆ ವಾರವಾರವೂ ಮಾಡುವ ಕೆಲಸದ ವೇಳೆಗೆ ಹೆಚ್ಚಿನ ತಾಸುಗಳನ್ನು ಸೇರಿಸಲು ಯತ್ನಿಸಿದರು. ವಾರದಲ್ಲಿ ದುಡಿವ ತಾಸುಗಳನ್ನು 60ಕ್ಕೇರಿಸಿದಾಗ ಬರುಬರುತ್ತ ಕೆಲಸ ಕೆಡುತ್ತ ಬಂದಿತು. ಬೇಗನೆ, ದಿನಕ್ಕೆ 8 ತಾಸುಗಳ, ವಾರಕ್ಕೆ 40-44 ತಾಸುಗಳ, ಸರಿಸಮವಾದ ಹಿಂದಿನ ಪದ್ಧತಿಗೇ ಹೋಗಬೇಕಾಯಿತು. ನಡುವೆ ಎಷ್ಟು ಬಾರಿ, ಎಷ್ಟು ಹೊತ್ತು ವಿರಾಮ ಇರಬೇಕೆನ್ನುವುದೂ ಮುಖ್ಯವೇ, ಜವಾಬ್ದಾರಿ ಕೆಲಸಗಳಾದರೆ, ಚುಟುಕು ವಿರಾಮಗಳು ಆಗಾಗ್ಗೆ ಇರಬೇಕು ವಿರಾಮವನ್ನು ಹೇಗೆ ಕಳೆಯಬೇಕು ಎನ್ನುವುದು ಮಾಡುವ ಕೆಲಸವನ್ನು ಅನುಸರಿಸಿರುವುದು. ಮೈ ದುಡಿತವೇ ಹೆಚ್ಚಿದ್ದರೆ ಪೂರಾ ಆರಾಮ ಬೇಕು. ಬುದ್ಧಿಗೆಲಸಿಗಳಾದರೆ, ಒಂದಿಷ್ಟು ಅಡ್ಡಾಟ, ಹಗುರ, ಮನೋರಂಜನೆ, ಹರಟೆ, ಕಾಫಿ ವಿರಾಮವೋ ಸಾಕಾಗುತ್ತದೆ. ಹೆಚ್ಚು ಕಾಲ ವಿರಾಮವಾದರೆ, ಮತ್ತೆ ಕೆಲಸ ಕೈಗೆತ್ತಿಕೊಳ್ಳುವುದು ನಿಧಾನವಾಗುವುದು. ಎಷ್ಟೊ ವೇಳೆ ಕೆಲಸವನ್ನೇ ಬದಲಾಯಿಸಿದರೆ ಆರಾಮವಾದಷ್ಟೇ ಬೇಗನೆ ಆಯಾಸ ಕಳೆವುದು.

	ಕೆಲವೇಳೆ, ಮಾಡುವ ಕೆಲಸಕ್ಕಿಂತಲೂ ಅದನ್ನು ಮಾಡುವ ರೀತಿ ಮುಖ್ಯ. ಇದಕ್ಕಾಗಿ, ಕೆಲಸಕ್ಕೆ ಹಿಡಿವ ಹೊತ್ತು, ಚಲನೆಗಳನ್ನು ಲೆಕ್ಕಹಾಕಿ, ಕಡಿಮೆ ಶ್ರಮ, ದುಡಿತಗಳಿಂದ ಇನ್ನೂ ಬೇಗನೆ ಅದೇ ಕೆಲಸವನ್ನು ಚೆನ್ನಾಗಿ ಮಾಡುವ ವಿಧಾನಗಳನ್ನು ಕಂಡುಹಿಡಿಯುವ ಪದ್ಧತಿಗಳು ಈಗ ಜಾರಿಗೆ ಬಂದಿವೆ. ದಿನವೆಲ್ಲ ಮಾಡಿದ್ದನ್ನೇ ಮಾಡುತ್ತಲೇ ಇದ್ದರೆ ಬೇಜಾರು ಬಂದು ಆಯಾಸ ಬೇಗನೆ ಹುಟ್ಟುವುದು. ಅದರಲ್ಲೂ ತಂತಾನಾಗಿ ನಡೆವ ಯಂತ್ರಗಳು ಬಂದ ಮೇಲಂತೂ ಇದು ಇನ್ನೂ ಮುಖ್ಯವಾಯಿತು. ಏಕೆಂದರೆ, ಯಂತ್ರದ ಮೇಲ್ವಿಚಾರಕ ಯಾವಾಗಲೂ ಬಲುಚುರುಕಾಗಿ ಇರಬೇಕಾಗುತ್ತದೆ. ಇಲ್ಲಿ ಬೇಜಾರು ತಲೆ ಹಾಕಿದರೆ, ಗಮನ ಎತ್ತಲೋ ಹರಿವುದು, ಕೆಲಸವೂ ಕೆಡುವುದು.

	ಆಯಾಸವನ್ನು ಬೇಗನೆ ಹುಟ್ಟಿಸುವ ಕೆಲಸದ ಸ್ಥಿತಿಗಳು ಹಲವಾರಿವೆ. ಸರಿಯಾಗಿ ಗಾಳಿಯಾಡುತ್ತಿರದಿದ್ದಲ್ಲಿ ಬೇಸಿಗೆ ಕಾಲದಲ್ಲಿ ಯಾವಾಗಲೂ ಉತ್ಪತ್ತಿ ತಗ್ಗುವುದು. ಹಲವಾರು ವೃತ್ತಿಗಳಲ್ಲಿ ಕೃತಕ ದೀಪಗಳ ಬೆಳಕುಗಳಲ್ಲಿ ಕೆಲಸ ಮಾಡುವ ಹೊತ್ತಿನಲ್ಲೂ ತಗ್ಗುತ್ತದೆ. ಹಾಗೇ ಕಾರ್ಖಾನೆಯಲ್ಲಿ ಆಕಸ್ಮಿಕಗಳು ಮೇಲಿಂದ ಮೇಲೆ ಆಗುತ್ತಿದ್ದರೆ, ಅದರ ಅಂಜಿಕೆಯಿಂದ ಚಿಂತೆಯಾಗಿ ಉತ್ಪತ್ತಿ ತಗ್ಗುವುದು. ಮೇಲ್ವಿಚಾರಕನ, ಒಂದಿಗನ ಮೇಲಿನ, ಕೋಪಗಳಿಂದಲೂ ಬೇಗನೆ ಆಯಾಸವಾಗಬಹುದು.

	ಆವರಣ: ಕೆಲಸ ಮಾಡುವ ಬೇಗನೆ ಆಯಾಸ ಹುಟ್ಟಿಸುವ ಕಾರಕಗಳು ಹಲವಾರಿವೆ: ಕಣ್ಣಿಗೆ ಕುಕ್ಕುವ, ನೆರಳು ಮೇಲೆ ಬೀಳುವ, ಸಾಲದಷ್ಟು ಬೆಳಕು; ತಲೆಚಿಟ್ಟು ಹಿಡಿಸುವಷ್ಟು ಜೋರಿನ ಸದ್ದು, ಗಲಾಟೆ; ಕಾವು, ತೇವ, ಗಾಳಿಯ ಚಲನೆ ಇವು ಚೆನ್ನಾಗಿರದ, ತಡೆಯಲಾರದ ಹವಾಗುಣ, ತೇವ ಅಷ್ಟಾಗಿಲ್ಲದಿದ್ದರೆ ಕೆಲಸಗಾರರು ಹೆಚ್ಚಿನ ಕಾವನ್ನು ತಡೆಯಬಲ್ಲರು. ಗಾಳಿ ಚೆನ್ನಾಗಿ ಬೀಸುತ್ತಿದ್ದರೆ, ತೇವ ವಿಪರೀತವಾಗಿದ್ದರೂ ತಡೆದುಕೊಳ್ಳಬಹುದು. ನಿಂತಲ್ಲಿ ನಿಂತಿರುವ ಗಾಳಿಯಲ್ಲಿ ಮನಗುಂದುವುದು. ಆದರೆ, ತೇವ ಅಷ್ಟೇ ಇದ್ದು ಕಾವು ಬಹಳವಾಗಿ ಏರಿದರೂ ಆಯಾಸ ಬೇಗನೆ ತೋರುತ್ತದೆ. ಬಲು ಕಾವೇರಿದರೆ, ನಾಡಿ ಜೋರಾಗಿ ಬಡಿಯುವುದು. ರಕ್ತ ಹರಿವು ಸಾಲದಾಗಿ ಕೈಕಾಲುಗಳು ಚಳುಕು ಹಿಡಿಯುತ್ತವೆ. ಬಿಸಿಲಿನ ಧಕ್ಕೆ, ಸುಸ್ತು ಆಗುವುವು. ಉಪ್ಪನ್ನು ಹೆಚ್ಚಾಗಿ ಸೇವಿಸಿದರೆ ತುಸು ಶಮನ, ಕೆಲವು ಆರೋಗ್ಯ ಕೆಡುವುದಲ್ಲದೆ ಆಕಸ್ಮಿಕಗಳೂ ಹೆಚ್ಚಾಗುತ್ತವೆ.

	ಕೆಲಸಗಾರರಲ್ಲಿ ಆಯಾಸ, ಸುಸ್ತು, ಬೇಸರಗಳಿಗೆ ಬಹುಮಟ್ಟಿಗೆ ಮೇಲ್ವಿಚಾರಕರಿಂದ ಬರುವ ಉತ್ತೇಜನ, ಮೇಸ್ತ್ರಿಗಳ ಒಂದಿಗರ ಬಯ್ಗಳು, ಹೊರಗೆ ಸಿಗುವ ಮರ್ಯಾದೆ, ತಮ್ಮವೇ ಬೇರೆ ತಾಪತ್ರಯಗಳೂ ಕಾರಣವಾಗುತ್ತವೆ. ಚಿಂತೆ, ತಾಪತ್ರಯಗಳು ತಲೆಗೆ ಹೊಕ್ಕರೆ ಕೆಲಸಗಾರನಲ್ಲಿ ಆಯಾಸ ತೋರುವುದು. ಮಾಡುವ ಕೆಲಸ ಆಸಕ್ತಿ ಹುಮ್ಮಸ್ಸು ಹುಟ್ಟಿಸುವಂತಿದ್ದರೆ, ಎಷ್ಟು ಕಷ್ಟವಾಗಿದ್ದರೂ ಆಯಾಸ ಗೊಳಿಸದು.

	ಕೊನೆಯದಾಗಿ, ಕೆಲಸಗಾರನ ಆರೋಗ್ಯ ಕಾಪಾಡುವುದು ಬಲು ಮುಖ್ಯ. ಆರೋಗ್ಯವಾಗಿರುವ ಹೆಂಗಸಾಗಲಿ ಗಂಡಸಾಗಲಿ ಎಂದಿಗೂ ಆಯಾಸವನ್ನು ಚೆನ್ನಾಗಿ ಮುಂದೂಡಬಲ್ಲರು. ಆವರಣದಲ್ಲಿ ಕೆಡುಕಾಗಿಸುವ ಕಾರಕಗಳನ್ನು ಹೋಗಲಾಡಿಸಿದರೆ ಕೆಲಸವೂ ಚೆನ್ನಾಗುವುದು. ಇದರಿಂದಲೇ ಆಗಿಂದಾಗ್ಗೆ ಕೆಲಸಗಾರರ ವೈದ್ಯ ಪರೀಕ್ಷೆಗಳನ್ನು ಮಾಡುತ್ತಿದ್ದರೆ, ಹೆಚ್ಚಿನ ಮಟ್ಟದಲ್ಲಿ ಲವಲವಿಕೆಯಿಂದ ಇರುವರು. ಇದರೊಂದಿಗೆ ವಿರಾಮ ಕಾಲ ಕಳೆಯಲು, ಆಟದ ಬಯಲು, ಒಳಾಂಗಣ ಆಟಗಳು, ಹವ್ಯಾಸಗಳಿಗೆ ಅನುಕೂಲ ಮಾಡಿಕೊಡಬೇಕು.
	
(ನೋಡಿ- ಕೈಗಾರಿಕಾ-ವೈದ್ಯ)									
(ಡಿ.ಇ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ